ನೇಪಾಲಿ ಭಾಷೆ -
	ಇಂಡೊ-ಅರ್ಯನ್ ಭಾಷಾವರ್ಗಕ್ಕೆ ಸೇರಿದ, ನೇಪಾಲ ರಾಜ್ಯದ ಮುಖ್ಯಭಾಷೆ. ರಾಜ್ಯದ ಸಾಹಿತ್ಯ. ಆಡಳಿತ ಹಾಗೂ ಸಾಮಾನ್ಯ ವ್ಯವಹಾರ ಇದೇ ಭಾಷೆಯಲ್ಲಿ ನಡೆಯುತ್ತದೆ. ನೇಪಾಲಿ ಭಾಷೆಯನ್ನು ಮೂರು ಹೆಸರುಗಳಿಂದ ಸೂಚಿಸಲಾಗುತ್ತದೆ. 1) ಗೊರ್ಖಾಲಿ ಅಥವಾ ಗುರ್ಖಾಲಿ. ಗೊರ್ಖಾ ಪಟ್ಟಣದ ಸುತ್ತಲಿನ ಪ್ರದೇಶವನ್ನಾಳಿದ ಪೃಥ್ವೀನಾರಾಯಣ ಸಾಹನೆಂಬ ರಾಜನ ಕಾಲದಿಂದ (ಕ್ರಿ. ಶ. 1769) ನೇಪಾಲಿಗೆ ಈ ಹೆಸರು. (2) ಖಾಸ್-ಕುರಾ ಅಂದರೆ ಖಾಸ್ ಜನರ ಭಾಷೆ. (3) ಪರ್ಬತಿಯಾ ಅಥವಾ ಪರ್ವತೀಯ ಭಾಷೆ. ಗೊರ್ಖಾಗಳು ನೇಪಾಲ ಕೊಳ್ಳವನ್ನು ಆಕ್ರಮಿಸಿಕೊಳ್ಳುವ ಪೂರ್ವದಲ್ಲಿ ಆ ಕೊಳ್ಳದಲ್ಲಿ ನೇವಾರ ಜನಾಂಗ ವಾಸವಾಗಿತ್ತು. ಅವರ ಭಾಷೆಯಾದ ನೇವಾರಿ ಎಂಬುದು ಮುಂಡಾ ಅಥವಾ ಅಸ್ಟ್ರೋಏಷ್ಯಾಟಿಕ್ ವರ್ಗಕ್ಕೆ ಸೇರಿದ ಭಾಷೆಯಾಗಿತ್ತು. ಕೊಳ್ಳದ ಭಾಷೆಯಾದ ನೇವಾರಿಗೆ ವಿರುದ್ಧವಾಗಿ ತಮ್ಮದು ಪರ್ವತೀಯ ಭಾಷೆ ಎಂದು ಹೆಸರು ಪ್ರಚಾರಗೊಂಡಿತು.

	ನೇಪಾಲಿಯ ಧ್ವನಿರೂಪ, ವ್ಯಾಕರಣಗಳು ಸಂಸ್ಕøತದಿಂದಲೇ ಇದು ರೂಪಾಂತರ ಗೊಂಡಿವೆ. ಉದಾಹರಣೆಗೆ ಸಂಸ್ಕøತ ನೇಪಾಲಿಗಳ ಈ ಜ್ಞಾತಿಶಬ್ದಗಳನ್ನು ನೋಡಬಹುದು.
ಸಂ.
ನೇ.
ಸಂ.
ನೇ.

ಘೃತ
ಘಿಎ
ಕರ್ಮನ್
ಕಾಮ್

ಘರ್ಮ
ಘಾಮ್
ಚರ್ಮನ್
ಚಾಮ್

ಕಾಷ್ಠ
ಕಾಠ್
ಕೀಟ
ಕಿರೋ

ಪಿಷ್ಠ
ಪೀಠೋ
ಚಟಕ
ಚರೋ (ಹಕ್ಕಿ)

	ಈ ಜ್ಞಾತಿಶಬ್ದಗಳ ಅವಗಾಹನೆಯಿಂದ ನೇಪಾಳಿ ಭಾಷೆ ಗುಜರಾತಿ, ಸಿಂಧಿ, ಲಹಂದಾ, ಪಂಜಾಬಿ ಮತ್ತು ಹಿಂದಿಗಳಿಗೆ ಹೆಚ್ಚು ನಿಕಟವರ್ತಿಯಾಗಿದೆಯೆಂದು ಅರಿಯಬಹುದು. ಇದೇ ಕಾರಣಕ್ಕಾಗಿ ಗ್ರಿಯರ್‍ಸನ್ ಪಹಾಡಿ ಭಾಷೆ(=ನೇಪಾಲಿ) ರಾಜಸ್ತಾನಿಗೆ ತೀರ ಹತ್ತಿರವಿದೆ ಎಂದು ಹೇಳಿದುದು. ವ್ಯಾಕರಣದಲ್ಲಿಯೂ, ಹಿಂದಿಯಲ್ಲಿ ಷಷ್ಠಿ ವಿಭಕ್ತಿ ಪ್ರತ್ಯಯ ಕಾ ಇದ್ದರೆ ನೇಪಾಲಿಯಲ್ಲಿ ಕೊ ಇದೆ. ಇತ್ತೀಚೆಗೆ ಹಿಂದಿಯ ಸಂಪರ್ಕ ಹೆಚ್ಚಾಗುತ್ತ ಬಂದುದರಿಂದಲೂ ಹಿಂದಿ ಸಾಹಿತ್ಯಕೃತಿಗಳು ನೇಪಾಲಿಯಲ್ಲಿ ವಿಪುಲವಾಗಿ ಭಾಷಾಂತರ ಅಥವಾ ಅನುಕರಣಗೊಳಿಸುವುದರಿಂದಲೂ ನೇಪಾಲಿಯ ಮೇಲೆ ಹಿಂದಿಯ ಪ್ರಭಾವ ಹೆಚ್ಚುತ್ತ ಬಂದಿದೆ.

	ನೇಪಾಲಿಗಳು ಅ ದೇಶಕ್ಕೆ ಹೊರಗಿನಿಂದ ಬಂದವರೆಂದೂ ಅವರು ಬರುವ ಪೂರ್ವದಲ್ಲಿ ಮುಂಡಾ ವರ್ಗದ ನೇವಾರಿ ಭಾಷೆಯೇ ಅಲ್ಲಿತ್ತೆಂದೂ ಐತಿಹ್ಯ. ಆದುದರಿಂದ ಮೊದಲ ನೇಪಾಲಿಗಳು ನೇವಾರಿಗಳ ವೈರಿಗಳಾಗಿದ್ದು ಆಮೇಲೆ ಅವರೊಡನೆ ಸಹಬಾಳ್ವೆ ಮಾಡಿರಬೇಕು. ಇದರಿಂದಲೇ ನೇವಾರಿ ಭಾಷೆಯ ಗೌರವಾರ್ಥ ಸಮುಚ್ಚಯಸೂಚಕ ಪ್ರತ್ಯಯ ಮತ್ತು ಸಕರ್ಮಕ ಕ್ರಿಯಾಪದಗಳ ಕರ್ತೃವಿಗೆ ಸೇರುವ ಪ್ರಯೋಜಕ ಪ್ರತ್ಯಯಗಳು ನೇಪಾಲಿಗೆ ಎರವಲು ಹೋಗಿವೆ.

	ನೇಪಾಲಿ ಭಾಷೆಯ ಶಬ್ಧಭಂಡಾರ ತನ್ನ ಸಿರಿವಂತಿಕೆಯನ್ನು ಅರು ಭಾಷೆಗಳಿಂದ ಎಳೆದುಕೊಂಡಿದೆ. ಸಂಸ್ಕøತದಿಂದ ಪಡೆದ ಪುರಾತನ ಸಂಪತ್ತು ಇದ್ದೇ ಇದೆ. ಅಲ್ಲದೆ ಮುಂಡಾವರ್ಗದ ನೇವಾರಿಯಿಂದಲೂ ದ್ರಾವಿಡ ಭಾಷೆಯಾದ ಕುಡುಖ್‍ದ (ಧಾಂಗಾರ್-ಕುಡುಖ್) ಸಂಪರ್ಕದ ಮೂಲಕ ದ್ರಾವಿಡ ಭಾಷೆಗಳಿಂದಲೂ ದಕ್ಷಿಣಕ್ಕೆ ಹಿಂದಿ ಬಿಹಾರಿಗಳ ಸಂಪರ್ಕ ಬಂದುದರಿಂದ ಅ ಭಾಷೆಗಳಿಂದಲೂ ಶಬ್ದಗಳ ಎರವನ್ನು ಪಡೆದಿದೆ. ಅರ್ಯಾಬಿಕ್ ಮತ್ತು ಇರಾನಿ ಶಬ್ದಗಳು ಇರಾನಿಯ ಮುಖಾಂತರ ಹಿಂದಿಗೆ ಬಂದು ಅಲ್ಲಿಂದ ನೇಪಾಲಿಗೂ ಹೋಗಿವೆ. ಗುರ್ಖಾ (ಗೋರ್ಖಾ) ಜನರು ಭಾರತದ ಸೈನ್ಯದಲ್ಲಿ ಸೇರಿದುದರಿಂದಲೂ ಇಂಗ್ಲಿಷ್ ಶಿಕ್ಷಣದ ಪ್ರಭಾವದಿಂದಲೂ ಇಂಗ್ಲಿಷ್ ಶಬ್ದಗಳೂ ನೇಪಾಲಿಯಲ್ಲಿ ಸ್ಥಾನ ಪಡೆದಿವೆ.

	ನೇಪಾಲಿ ದೇವನಾಗರಿ ಲಿಪಿಯನ್ನೇ ಉಪಯೋಗಿಸುತ್ತದೆ. ದೇವನಾಗರಿ ಲಿಪಿಗಿರುವ ಧ್ವನಿಗುಣವೆಲ್ಲ ನೇಪಾಲಿಗೆ ಲಭ್ಯವಾಗಿದೆ. ಅದರೆ ಕೆಲವಡೆ ಹಲವಂತ ಗುರುತು ಇಲ್ಲದೆ ಇರುವಾಗಲೂ ಅಂದರೆ ಆಕಾರ ಸೇರಿಕೊಂಡಿದ್ದಾಗಲೂ ಅವನ್ನು ವ್ಯಂಜನದಂತೆ ಉಚ್ಚರಿಸುವ ಹಿಂದಿ ಪದ್ಧತಿ ಸಂಯುಕ್ತಾಕ್ಷರಗಳ ವಿಶ್ಲೇಷಣೆಯಲ್ಲಿ ತೊಂದರೆ ಕೊಡುತ್ತದೆ. ಕೆಲವಡೆ ಮೊದಲ ವ್ಯಂಜನಕ್ಕೆ ಸೇರಿದ ಆಕಾರ ಲೋಪವಾದರೆ ಇನ್ನು ಕೆಲವಡೆ ಎರಡನೆಯ ವ್ಯಂಜನಕ್ಕೆ ಸೇರಿದ ಆಕಾರ ಲೋಪವಾಗುತ್ತದೆ. ಎರಡನೆಯ ದೋಷವೆಂದರೆ ಪ್ರಾತಿಪದಿಕಗಳನ್ನು ಸೂಚಿಸುವಾಗ ಶಬ್ದಾಂತ್ಯ ಸ್ಥಳದಲ್ಲಿ ಆಕಾರಯುಕ್ತ ವ್ಯಂಜನ ಬರೆದು ವ್ಯಂಜನಾಂತದಂತೆ ಉಚ್ಚಾರ ಮಾಡುವ ಪದ್ಧತಿ. ಹಾತ ಎಂದು ಬರೆದು ಹಾತ್ ಎಂದು ಬರೆದಿದ್ದಂತೆ ಓದುವುದು. ಇದನ್ನು ತೊಡೆದು ಹಾಕುವುದಕ್ಕೆಂದು ಟರ್ನರ್ ತಮ್ಮ ನೇಪಾಲಿ ನಿಘಂಟನಲ್ಲಿ ಎಲ್ಲ ಪ್ರಾತಿಪದಿಕಾಂತ ಸ್ಥಳಗಳಲ್ಲಿ ಹಲಂತ ಗುರುತನ್ನು ಉಪಯೋಗಿಸಿ ಶಬ್ದಗಳನ್ನು ಉಚ್ಚರಿತ ರೂಪದಲ್ಲಿಯೇ ಸಂಕೇತಿಸಿದ್ದಾರೆ.	(ಬಿ.ಬಿ.ಆರ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ